Saturday, January 28, 2017

ಕಲ್ಲು-ಹೂವು-ನೋವು-ನಲಿವು
ಅಯ್ಯೋ! ಅಲ್ಲೆಲ್ಲೆಡೆ ರಾಶಿರಾಶಿ ನನ್ನವು, ತನ್ನವು.
ಗಾಳಿ ಹೊಗಲೂ ಜಾಗವಿಲ್ಲದಲ್ಲಿಗೇ
ಓಡ್ಹೋಗಿ ಪೆಚ್ಚು ಹಿಂತಿರುಗುವ
ಮುದ್ದು ನನ್ನ ಚಿಟ್ಟೆಯೇ,
ಎಲ್ಲಿ, ರೆಕ್ಕೆ ಮುಚ್ಚೊಮ್ಮೆ,
ನಿಂತುಬಿಡೊಮ್ಮೆ,
ದೀರ್ಘ ಉಸಿರೆಳೆದುಕೋ..
ಬಿಡು ಆಳ- ಪಾತಾಳ, ಬಾನು-ಬೆಳ್ಮುಗಿಲು.
ನೆಲದವರು; ಪದತಲವಷ್ಟೇ ನಮ್ಮದು.
ಕಾಲೂರು; ರೆಕ್ಕೆಯಿತ್ತವನೇ ಕಾಲಿತ್ತಿಲ್ಲವೇನು?
ಇಲ್ಲವೇನಿಲ್ಲಿ ಬಯಲು ವಿಶಾಲ?
ಇಲ್ಲವೇ ನಂದನ-ವೃಂದಾವನ?

ವೃಜದ ವೇಣುವಷ್ಟೇ ಅಲ್ಲ,
ವೃಜದ ರೇಣುವಷ್ಟೇ ಅಲ್ಲ,
ಪಾವನವೆಂದರೆ, 
ವೃಜದ ಆ ಅವನು,
ಅವಳಿವಳು, ಮತ್ತೊಬ್ಬಳ ಹಾಡುಪಾಡಷ್ಟೇ ಅಲ್ಲ.
ಹುಡುಕುವುದೇ ಆದರೆ,
ಕೇಳುವ ಕಿವಿಗಳಲಿವೆ
ಅವನೂ, ಅವಳೂ, ನಾದವೂ, ಉನ್ಮಾದವೂ,
ರೆಕ್ಕೆಸದ್ದು ನಿನದು ಮೋಹನಮುರಳಿಯಾಗುವ ಜಾದುವೂ..

ಒಮ್ಮೊಮ್ಮೆ ತಟ್ಟನೆ ಹಸಿರಾಗುವ ಬಣ್ಣರಾಶಿಯೇ,
ಜೀವಂತಿಕೆಯಂಥ ನನ್ನ ಚಿಟ್ಟೆಯೇ,
ಆಗೆಲ್ಲ ನೀನು
ಹರಿವ ನೀರಲಿ ತೇಲಿಯೇ ಹಬ್ಬಬಲ್ಲೆ,
ಗಟ್ಟಿ ನೆಲದಾಳ ಬೇರೂರಿಯೂ ಹರಡಬಲ್ಲೆ.
ಅಳುವುದುಂಟೇನು ನದಿ ಎದೆಗಿಳಿಸಿಕೊಳಲಿಲ್ಲೆಂದು?
ಬೇರೂರಿಸಿ ನೆಲ ಶಿಶಿರಕೆ ತರಗೆಲೆ ಮಾಡಿತೆಂದು?


ಅಂತ್ಯವಿರದ ಹಾದಿಯೇನಲ್ಲ ನಿರೀಕ್ಷೆಯದ್ದು
ಯಾರಿಗೆ ಗೊತ್ತು?

ಕೇಳುವ ಕಿವಿ ಸಾವಿನದೇ ಇದ್ದೀತು.
ಹಗಲುರಾತ್ರಿಯ ತಂತಿ ಮೀಟಿ
ಮಾತುಮೌನದ ತಂಬೂರಿ
ಒಂದಷ್ಟು ಗಾಯ, ಒಂದಷ್ಟು ಕಚಗುಳಿ
ಮೈಮರೆಸಿ ಹಾಡಿವೆ ರಾಗ
ಕಣ್ಣಿನಾಳದ ಏಕಾಂಗಿತನವೆದ್ದೆದ್ದು ಬಂದು ಕುಣಿದಾಗ.

ಶುರುವಲ್ಲಿ ಖುಲ್ಲಂಖುಲ್ಲಾ
ಖಾಲಿ ಬಿಳಿ ಹಾಳೆ
ಕಾಣುವಷ್ಟುದ್ದ ಶುದ್ಧ-ಶುಭ್ರ!
ಅದೇ, ಅಲ್ಲೇ, ಈಗ ಆಗಸದಂಥ ನಗು,
ಗಾಢವೊಂದು ಚಂದ ಮತ್ತು
ನೂರು ಮಿನುಗು ಮೀರುವ ಧ್ರುವತಾರೆ ನತ್ತು.

ಅಕಾಲ ಮಳೆಗೆ ಮಣ್ಣಿನೆದೆಯಿಂದ ಚಿಮ್ಮಿ
ಕನಸಂಥ ಜಾಡೊಂದು ಹಿಡಿದು
ಪರಿಮಳ ನೆಲೆಬಿಟ್ಟು ಹೊರಟಿತ್ತು
ಅರಳುತ್ತಾ, ಅರಳಿಸುತ್ತಾ..

 ನಿಲ್ಲಲಾರದ ಬದುಕು
ಹೊಸಹೊರಳು ದಾಟುತಾ
ಹಸುರಿಗಿನ್ನಷ್ಟು ಟಿಸಿಲೊಡೆವ,
ಕುಳಿಗಳಿಗೆಲ್ಲ ಕಡಲಾಗುವ,
ಕಡಲಿಗೋ ಇನ್ನಷ್ಟು ಉಪ್ಪಾಗುವ ಕನವರಿಕೆ.

ಜೋಗಿ ಮತ್ತವನ ಹಾಡುಪಾಡು
ಒಂಟಿತನದ ಬೇರಿಗಿಳಿಸಿ ಮಂಗಮಾಯ!
ಅವಗೆ ಬಯಲೇ ಆಸ್ತಿಯೂ, ಆಸ್ಥೆಯೂ…
ಬೇರಿಳಿದು ಅಡಿಪಾಯ ಬಿರುಕೊಡೆವ ಮುನ್ನ
ಕಣ್ರೆಪ್ಪೆಯೆದ್ದಿವೆ, ನಿದ್ದೆಯೊದ್ದಿವೆ
ಕನಸಿರುವುದೇ ಮುರಿವುದಕೆ!

ಇನಿಕುಕಿಲಿರದು, ಹನಿವ ಮುಗಿಲಿರದು
ಚುಚ್ಚುವದೋ, ಜೇನುಕ್ಕಿಸುವದೋ
ನುಡಿಮುತ್ತಿರದು; ಬಹುಶಃ
ಆಳಗಳಲಿನ್ನು ಬರೀ ಸುಖದ ನರಳಿಕೆ;
ಚಿಮ್ಮುವ ಪರಿಮಳವಿರದು..


Saturday, December 17, 2016

ಬರುವೆನೆಂದವನ
ಕಾಲಿಗಡ್ದಕಟ್ಟಿದ ಹಾಲಿನ ಋಣವ್ಯಾವುದೋ!
ಕೊಳಲೋ, ನವಿಲೋ, ಬೆಣ್ಣೆಯೋ, ಮಣ್ಣೋ
ಕಲ್ಪನೆಯಲೇ ಬಂಧಿಸಿಟ್ಟ ರಸಕ್ಷಣವ್ಯಾವುದೋ!
ಪಾತಾಳದ ಬಂಧಭೀತಿಯೋ,
ಮೀರಿದಾತನೂ ಒಳಗೊಂಡು ಕುಸಿದ ರಣಕಣವ್ಯಾವುದೋ!

ಗಾನದುದ್ದಕೂ ಧ್ಯಾನದುದ್ದಕೂ
ಜೊತೆಯಾಗುವ ವಾಗ್ದಾನವೊಂದಿತ್ತು;
ಭರದಿ ಶುರುವಾದ ಸ್ನಿಗ್ಧ ಯಾನವೂ..

ಸುರಿದಿತ್ತು, ಹರಿದು ಹಾಯ್ದಿತ್ತೊಮ್ಮೆ ಕೆಚ್ಚಲು
ಹೆಜ್ಜೆ ಸದ್ದಿಗೆ, ಅವನಧರದ ನೆನಕೆಗೇ.
ಬಿಗಿತ ಕಾದಿದೆ ಬಿರಿಯಲೀಗ ಕಣ್ಣೆಡೆಯಲೂ, ಹೆಣ್ಣೆದೆಯಲೂ
ನದಿಯಾಗಿ, ಝರಿಯಾಗಿ ಕೊನೆಗೊಮ್ಮೆ
ಕಡಲಂಥ ದಾಹದಲಿ ಸವಿಯಾಗಿ ಕರಗಲಿಕೆ.

ಕಾಲದಾಳದಲೆಲ್ಲೋ ಮೂಲವಿದೆ;
ಮೂಲದಾಳದಲಿ ಸಾಲದ ಮಾತಿದೆ.
ತೀರಿಯೇ ತೀರಬೇಕು!
ಏಳುಹೆಜ್ಜೆಯ ಹೆಸರು ಗಾವುದದಷ್ಟಾಗುತಲಾದರೂ,
ಕೆಲನೋಟ, ತುಸುಮಾತು, ಚಣಕಾಲದಲಾದರೂ..

ಬರುವೆನೆಂದಿದ್ದ, ಬಂದಾನು;
ಕೊನೆಯೆಂಬುದುಂಟೇ ನಿರೀಕ್ಷೆಗೆ?
ಹಾದಿ ಮೂರ್ತ-ಅಮೂರ್ತವೆರಡಕೂ,
ಸುಳ್ಳಿಗೂ ಸತ್ಯಕೂ
ಒಪ್ಪವಾಗುವುದಲ್ಲದ ಗಮ್ಯವುಂಟೇ?

ಬರುವೆಯಾದರೆ ಬಾ
ಕಣ್ಣೊರೆಸಲೆನ್ನ ಕಣ್ಣೆವೆ ಕಾದಿದೆ;
ನಗೆಗೆ ಬಣ್ಣ ಬಳಿಯಲು ಕೆನ್ನೆ ಕೆಂಪು!
ಬಾರೆಯಾದರೂ ಸರಿಯೇ ದೊರೆಯೇ,
ಇದೋ ಹೊತ್ತು ಹೊತ್ತಿದೆ ಭಾರ
ನಿನ್ನತ್ತ ಹೊರಡಿಸಲು,
ಕಳಚಿ ಒಂದಷ್ಟು, ಇನ್ನಷ್ಟು ತೊಡಿಸಿಕೊಡಲು!

Saturday, December 3, 2016

ದಾಖಲಾಗದ ಪಾದಗಳು ಮತ್ತು ದಾಖಲಿಸುವ ಪದಗಳು
------------------------------------------
ಅದೋ ಜರಿವ ಪರಿಧಿಯಿಂದಾಚೆ
ಸಿಡಿದು ಬಂದ ತುಣುಕೊಂದು
ಮೆತ್ತನೆ ಮುಟ್ಟಿ ಪಾದ ಮುತ್ತಿಕ್ಕುತಿದೆ;
ಪ್ರತಿಬಾರಿ ಕೊಡವುತಲೇ ಪಾದದ ಕುರುಡು ನೀಗುತದೆ!

ಮೀನು ಮನೆಯಲಿ ಈಜುಹೆಜ್ಜೆಯ
ಜಾಡನರಸಿ ಹೋಗುವ ಕಣ್ಣಲಿ
ಹಿಮ್ಮಡಿ ತೋರುವದದೇ ಪಾದದ,
ಮತ್ತದೇ ಅಚ್ಚುಮೆಚ್ಚೆನಿಸುವ ಹೆಬ್ಬೆರಳ ಬಿಂಬ!

ಅವಧೂತನುಳಿಸದೇ ಹೋದ ಹೆಜ್ಜೆಗುರುತಿನಡಿ
ವಿರಹ-ಪ್ರೀತಿ ಸಂಧಿಸುವಾಗ
ನೂರು ಕತೆ, ನೂರಾರು ಕಣ್ಣೀರ ಹನಿ;
ರಾತ್ರಿಯ ಬೀಳ್ಕೊಟ್ಟ ಇಬ್ಬನಿ, ಹಗಲ ಬೆನ್ನಿನ ಮಂಜುಹನಿ!

ಸದ್ದು-ಸುದ್ದಿಯಿಲ್ಲದ ಒಣಕಂಠದಲಿ
ಕೊರಡೊಂದು ಕೊಳಲಾಗುಲಿವುದಾದರೆ,
ಸದ್ದು-ಗದ್ದಲದ ದಿನದ ಮಿಡಿತದಲಿ
ಮೌನವೊಂದು ನಲಿವ ನವಿಲಾದುದಾದರೆ,
ಅದು ನೆನಪಿನಾಟವೇ ಇದ್ದೀತು!
ಹಣೆಯ ಪೂರ್ಣಚಂದ್ರನಲ್ಲೇನಾದರೂ
ಅಡಗಿದ್ದಾದರೆ ಅದು ಮುತ್ತೇ ಇದ್ದೀತು!

ಮೌನಕೂ, ಗಾನಕೂ ಒಂದೇಸಮ
ಹರಡಿದೆ ಬಟಾಬಯಲಂಥದೊಂದು ಗಮನ!
ಹುಣ್ಣಿಮೆಗೂ, ಆಮಾವಾಸ್ಯೆಗೂ
ಎದೆಯೊಡ್ಡಿದೆ ದಿಟ್ಟ ಇರುಳಂಥದೊಂದು ಮನ!

ಅಲ್ಲೆಲ್ಲೋ ಬಿತ್ತಿದ ಬೀಜ ಹಣ್ಣಾಗಿ ಕಳಿಯುವಾಗ
ಒದ್ದೆ ಅಂಗೈಯ್ಯಗಲ ನೆಲವೊಂದು ಇನ್ನೆಲ್ಲೋ
ಬರಲಿರುವ ಬೀಜಕಾಗಿ, ತೆರಳಿರುವ ಮಳೆಗಾಗಿ
ಅನಂತ ಕಾಯುವುದ ರೂಢಿಯಾಗಿಸಿಕೊಳುತಿದೆ..

ಜರಿವ ದಡ ಹಾದು ಚಿಮ್ಮುವ ನೀರಿನಲೆ
ನೇವರಿಸಿ ಅದೇ ಮಿದುಪಾದ ತೊಳೆಯುತಾ,
ಬೀರಿ ಬೆಳಕು, ಬರೆಯುತದೆ ದಾರಿ!
ಕಲ್ಪದುದ್ದದೊಂದು ಕರೆ-
"ಬಲಗಾಲಿಟ್ಟು ಒಳಬಾ.."
ಕದವಿಲ್ಲದೆದೆ, ಅಳಿಸದ ರಂಗೋಲಿ, ಬಾಡದ ತೋರಣ
ಬಿಡದೆ ಕಾತರಿಸುತವೆ...
ಮತ್ತಿನ್ನೊಂದು ದಿನ-ರಾತ್ರಿಯುರುಳುತವೆ!

Wednesday, November 9, 2016

ಬೆರಳ ತುದಿಯಲ್ಲಿ ಸಾಗರ ಅಡಗಿತ್ತೇನೋ ಹುಡುಗಾ?
ಮುಟ್ಟಿದ್ದಕೇ ಮುತ್ತುರಾಶಿ ಮುತ್ತಿದೆ!
ಕಣ್ಣಂಚಿನಲಿ ಸೂರ್ಯನೇ ಉದಯಿಸಿದ್ದೇನೋ ಹುಡುಗಾ?
ನೋಟವೊಂದಕೇ ಬಿಸಿಯೇರಿದೆ!

ನರನಾಡಿಯಲಿ ನಾಚಿಕೆ, ಬೆನ್ನಿಗೇ ಬಯಲಾಗುವ ಬಯಕೆ.
ಎದೆ ಹುಣಿಯಲಿ ಸಾಲುಸಾಲು ಚಿಗುರು ಆಸೆಗರಿಕೆ,
ಬೆಚ್ಚದೆ ಬೆದರದೆ ತೆನೆಯೊಡೆದ ಹಸಿ ಎದೆಗಾರಿಕೆ!

ಬೆಳಗು ಅಂಗಳಕೆ ಬಿತ್ತಿದ ಬಣ್ಣದ ನಡು ನೀನೆ ನಿಂತಿದ್ದೆ
ಬಿಸಿನೀರೊಲೆಯ ಹೊಗೆಸುರುಳಿ ಘಮವೊಯ್ದು ಊರಿಗೆಲ್ಲ ಸಾರಿತ್ತು.
ಕಂಡ ಕಣ್ಣಲೆಲ್ಲ ನೂರು ಪ್ರಶ್ನೆ; ಕೆನ್ನೆಕುಳಿ ಕೆಂಪು ಉತ್ತರಿಸಿತ್ತು!

ಬರಸೆಳೆದು ಮರೆಗೊಯ್ದ ಕಾಲದ ತುಣುಕು; ಗಂಟೆಯೊಂದೀಗ ಕ್ಷಣವಾಯ್ತು!
ಪುರುಷನೋ-ಪರುಷವೋ, ನನ್ನೊಳ-ಹೊರಗು ಬಂಗಾರವಾಯ್ತು!
ಎಳೆಬಿಸಿಲು ಹೊಳೆಹೊಳೆದೆ ನೀನು, ಇಬ್ಬನಿ ಕಣ್ಮುಚ್ಚಿ ಕರಗಿಯೇ ಕರಗಿತು!

ಸೋಪಾನವೊಂದೊಂದರಲೂ ಪ್ರೀತಿ ಮದರಂಗಿಯ ಜೋಡಿಹೆಜ್ಜೆಗುರುತು!
ತುರೀಯದಲಿ ಬಿಳಿಶಂಖದೊಡಲು  ಹೆಸರು ನಿನದೇ ಅನುರಣಿಸಿತ್ತು.
ನಾನೀಗ ಹೆಣ್ಣೆನಿಸಿದ ಗಳಿಗೆಯಿದು ನಿನ್ನ ಗಲ್ಲದಿಂದುದುರಿ ನನ್ನ ಹಣೆಗಿಳಿದಿತ್ತು!

ನಲ್ಲ, ನಾನಲ್ಲ; ಕೈಹಿಡಿದು ನೀನೇ ಮತ್ತೆ ಮತ್ತೆ ಮೇಲೆಮೇಲೇರಿಸಿದ್ದು!
ಮನಸು ಕಣ್ಬಿಟ್ಟಾಗೆಲ್ಲ ಘನಪರಿಮಳ ಒಳಹೊಕ್ಕಿತ್ತು; ಹೊಕ್ಕುಳ ಹೂವರಳಿತ್ತು!
ನೀ ನಡೆದಾಗ ನನ್ನಾಳದೊಳಗೆ, ಮಣ್ಣಿನ ಮನೆ, ಈ ಕಾಯ ದೇಗುಲವಾಯ್ತು!

Thursday, November 3, 2016


ಹೂವುದುರಿತೆಂದು
ಪಚ್ಚೆಯೆಂಬ ಪಚ್ಚೆ ಇಂಚಿಂಚು ಬಾಡುವಾಗ,
ಹೊಳಪೊಂದು ನೆಲಕಿಳಿಯಿತೆಂದು
ಆಗಸವೇ ಬೂದು ಇಳಿಜಾರಲಿ ಅಸ್ತಮಿಸಹೊರಟಾಗ,
ಹಾಡುತಾ ಅಳುತ್ತವೆ ಬಣ್ಣಗಳು, ಹಗಲು ಮತ್ತು ರಾತ್ರಿ..

ಅದೋ ಶಿಖರಾಗ್ರದಲೂ ಬಿಡದ ಆ ಗುಂಗು
ಮಂಜಿನಂತೆ ಮುಸುಕಿ ಧೊಪ್ಪನುರುಳಿಸಿದ ಹಾಗೆ!
ಇದೋ ಈ ಪಾತಾಳದಲೂ ನನದೊಂದು ಗುಂಗು
ಹಾಗೆ ಬಿದ್ದುದ ನೆನೆನೆನೆದು ಬಿಕ್ಕಿದ ಹಾಗೆ!

ಬಂದು ಹೋಗಿಯೂಬಿಟ್ಟೆ,
ನಾ ಗುರುತುಳಿಸಿಕೊಳಲಿಲ್ಲ..
ನಗುತಲೇ ಕಣ್ತುಂಬಿಕೊಳುವ ಸಂಜೆಗಳಲಿ
ಮುತ್ತಿಕ್ಕಿಸಿಕೊಂಡ ಹಣೆ ಹೇಳುವ ಕತೆ
ಖಾಲಿ ಕೆನ್ನೆ ಕಿವಿಗೊಟ್ಟು ಕೇಳುತದೆ!

ಭರತಮಹಾಬಲಿಗೆ ಅಳಿಸಿಹೋದ ಗುರುತುಗಳಲಿ
ವೈರಾಗ್ಯ ಕಾಣಿಸಿತಂತೆ!
ಅಲ್ಲೆಲ್ಲೋ ಗಾಳಿ ಮೈಯ್ಯಲಿ ಗುರುತುಳಿಸಲು ಹೆಣಗಾಡುತಿದೆ;
ನನದೊಂದು ಜೈ ಅಂಥ ಬದುಕಿಗೆ!

ಅವನಾಣತಿಯಂತೆ ಉರುಳುತಿರುವ
ಅವನದೇ ಗುಡಿಯುಳಿಸಲು
ಅವನದೇ ನಾಮಾರ್ಚನೆಯ ಮೊರೆ ಹೊಗುವ ಹಾಗೆ,
ಅತ್ತತ್ತಲೇ ಸಾಗುವ ಪಾದದಡಿ ಮೆತ್ತಿಕೊಳುವ
ಧೂಳಕಣವಾಗುವುದ ಕಲಿತಾಗಿದೆ!

ಸೋಲುವುದಿಲ್ಲ;
ಬಾಳುವುದಿಲ್ಲ ನೆನೆಯದೆ ಒಂದು ಕ್ಷಣವೂ..
ಒಪ್ಪಿಸಿಕೋ ಶೂನ್ಯವನೇ
ನಿನಗಿಷ್ಟವಾದ ಪಕ್ಷದಲಿ..
ಅಪೂರ್ಣವೊಂದು ಅಪೂರ್ಣವೇ ಉಳಿವ ನಿಟ್ಟಿನಲಿ
 ಇಲ್ಲವೇ ಆಗುವ ಹೊತ್ತಿನಲಿ.

ಇದೋ ಹೊರಟೆ
ಸಿಟ್ಟಿಗೆ ಬಣ್ಣದ ರೆಕ್ಕೆ ಹಚ್ಚಿ
ಚಿಟ್ಟೆಯಾಗಿಸುವ ದಿಶೆಗೆ ಬೆರಗಾಗಿ!
ಬೆರಳಿಗೆ ತಂತಿ ಚುಚ್ಚಿ
ಚಿಮ್ಮಿದ ರಕ್ತ ಸ್ವರವಾಗಿಸುವ ನಶೆಗೆ ಶಿರಬಾಗಿ.

ಇಲ್ಲ; ಬರಲಾರೆ ಕೈಹಿಡಿದೊಯ್ವೆನೆನುವ
ಅಣಕು ದೀಪದ ಜೊತೆಗೆ..
ಬೇನಾಮಿ ತೀರಕೊಂದು ಇರದ ಹೆಸರಿಟ್ಟು
ಬಾ ಎನುವ ಕರೆಯ ಜೊತೆಗೆ.

ಅಲ್ಲೊಂದು ಲೋಕವುಂಟಂತೆ
ಹಾದಿಯುದ್ದಕು ನಿನ್ನ ನಿನ್ನೆ ಮೊಹರೊತ್ತಿವೆಯಂತೆ..
ಅಲ್ಲಿ ನೋವು ಅಳಿಸದಂತೆ!
ತನ್ನೊಳಗದು ಮೈ ಮರೆಯುವುದಂತೆ..

ಇಲ್ಲ; ಬರಲಾರೆ ಕತ್ತಲ ಮುಖದೊಂದು
ಅನಪೇಕ್ಷಿತ ನಗೆಯ ಮಿನುಗಾಗಿ..
ತನ್ನಷ್ಟಕೇ ಬಲುತೃಪ್ತ ಮುಚ್ಚುಗಣ್ಣಿನ
ಕಣ್ರೆಪ್ಪೆ ಕುಣಿತದ ಕನಸಾಗಿ..

ತಿನುವ ತುತ್ತುತುತ್ತಲೂ
ನೆನಕೆ ಸಹಿಯೊತ್ತಿರುತಿದ್ದ ಅಂದುಗಳಿಂದ
ಇದೋ ಹೊರಟೆ..
ಕಣ್ಣಯಾನದುದ್ದಕೂ
ಪಸೆಗೆ ಜಲಸಂಸ್ಕೃತಿಯ ಮುಖವಾಡವಿತ್ತು
ನಗುವ ಕೈಗಳ ಪೂಜೆ,
ಅಳುವ ಕೈಗಳ ಮಂತ್ರ-ತಂತ್ರಕೆ
ಮಡಿಲಾಗುವ ಆ ತಾಯಂಥ ತೀರಕೆ..

ಮತ್ತಲ್ಲಿಂದಲೂ ಇದೋ ಹೊರಟೆನೆಂದುಕೊಂಡಿದ್ದೇನೆ,
ಮುತ್ತು-ಹವಳ, ರಾಡಿ-ಬಗ್ಗಡ ದಾಟಿ
ಕಲ್ಲೆಬ್ಬಿಸಿದ ಅಲೆಯುಂಗುರ,
ಕಾಲವೆಸೆದ ಸುನಾಮಿಗಳೂ ಕಂಡಿಲ್ಲದ
ಅಲುಗದ, ಕದಡದ
ಶಾಂತಿಯದಿನ್ನೊಂದು ಮುಖವಾಡವುಟ್ಟ
ತಳದ ಮೌನನೆಲೆಗೆ...